ವರ್ಜಿಲ್
	ಕ್ರಿ.ಪೂ. 70-19. ಪ್ರಾಚೀನ ರೋಮ್‍ನ ಮಹಾಕವಿ. ಇವನ ಈನಿಯಡ್ ಮಹಾಕಾವ್ಯವನ್ನು ರೋಮ್‍ನ ರಾಷ್ಟ್ರೀಯ ಕಾವ್ಯವೆಂದು ಪರಿಗಣಿಸಲಾಗಿದೆ.

	ಉತ್ತರ ಇಟಲಿಯ ಆಂಡೀಸ್ ಎಂಬ ಗ್ರಾಮದಲ್ಲಿ ಕ್ರಿ.ಪೂ. 70ರಲ್ಲಿ ಜನಿಸಿದ. ಪಬ್ಲಿಯಸ್ ವರ್ಜಿಲಿಯಸ್ ಮ್ಯಾರೋ ಇವನ ಪೂರ್ಣ ಹೆಸರು. ಇವನ ಪ್ರಾಥಮಿಕ ಶಿಕ್ಷಣ ಕ್ರೆಮೊನಾ ಹಾಗೂ ಮಿಲಾನ್ ನಗರಗಳಲ್ಲಿ ನಡೆಯಿತು. ಅನಂತರ ತತ್ತ್ವ ಶಾಸ್ತ್ರವನ್ನು ನೇಪಲ್ಸ್ ನಲ್ಲಿಯೂ ಅಲಂಕಾರ ಶಾಸ್ತ್ರವನ್ನು ರೋಮ್‍ನಲ್ಲೂ ಅಭ್ಯಸಿಸಿದ. ನ್ಯಾಯವಾದಿ ಯಾಗಿರಬೇಕಾದವನು ನ್ಯಾಯಾಲಯದಲ್ಲಿ ನಿಂತು ಮಾತನಾಡಲು ಅತ್ಯಂತ ಹಿಂದೆಗೆಯುತ್ತಿದ್ದ ಕಾರಣ, ಕಾವ್ಯಮಾರ್ಗವನ್ನು ಆರಿಸಿಕೊಂಡ. ಇವನ ಆರಂಭಿಕ ಕವಿತೆಗಳು ಇವನನ್ನು ಖ್ಯಾತನನ್ನಾಗಿಸಿದರೂ ಇವನಿಗೆ ಕಲೆಯಲ್ಲಿದ್ದ ತೀವ್ರ ಆಸಕ್ತಿ ಮುಂದೆ ಈತ ಚಕ್ರವರ್ತಿ ಅಗಸ್ಟಸ್‍ನ ಆಂತರಿಕ ಸಲಹೆಗಾರನಾಗಿ ನೇಮಕಗೊಳ್ಳಲು ಕಾರಣವಾಯಿತು;  ಅಲ್ಲದೆ ಇಟಲಿ ಹಾಗೂ ಅದರ ಇತಿಹಾಸವನ್ನು ಬರೆಯುವ ಅವಕಾಶವೂ ಲಭಿಸಿತು.

	ಈನಿಯಡ್ (ನೋಡಿ- ಈನಿಯಡ್) ಕಾವ್ಯವನ್ನು ಬರೆದು ಮುಗಿಸುವುದಕ್ಕೆ ಮುಂಚೆಯೇ ಈತ ನಿಧನನಾದ (ಕ್ರಿ.ಪೂ.19). ದುರದೃಷ್ಟ ಸಂಗತಿಯೆಂದರೆ ತನ್ನ ಕಾವ್ಯದ ಮಹತ್ತ್ವ ಕುರಿತು ಸಂಪೂರ್ಣ ನಂಬಿಕೆಯಿಲ್ಲದ ಈತ ಇದನ್ನು ನಾಶಗೊಳಿಸಬೇಕೆಂಬ ಸೂಚನೆ ಕೊಟ್ಟಿದ್ದ. ಆದರೆ ಚಕ್ರವರ್ತಿ ಅಗಸ್ಟಸ್ ಇದಕ್ಕೆ ಅವಕಾಶವೀಯದೆ ವರ್ಜಿಲನ ಇಬ್ಬರು ಸ್ನೇಹಿತರಿಗೆ ಈ ಮಹಾಕಾವ್ಯವನ್ನು ಪ್ರಕಟಣೆಗೆ ಸಿದ್ಧಗೊಳಿಸಲು ಆದೇಶಿಸಿದ.

	ಈತನ ಕವಿತ್ವದ ಮಹತ್ತ್ವವನ್ನು ಸಾಹಿತ್ಯ ಕ್ಷೇತ್ರಕ್ಕೆ ಮೊದಲು ಪರಿಚಯಿಸಿದ್ದು ಇವನ ಎಕಲೋಗಸ್ ಹಾಗೂ ಬ್ಯುಕಲಿಕ್ಸ್ ಕೃತಿಗಳು. ಕ್ರಿ.ಪೂ.ಸು. 42—35ರ ನಡುವೆ ಇವು ರಚಿತವಾದಂಥವು. ಇಲ್ಲಿನ ಮಹತ್ತ್ವದ 10 ಕವಿತೆಗಳು ಕುರಿ ಕಾಯುವವರ ಜೀವನಚಿತ್ರವನ್ನು ಕೊಡುವಂಥವು. ಇವು ಪ್ಯಾಸ್ಟೋರಲ್ಸ್ ಎಂದು ಖ್ಯಾತವಾಗಿವೆ. ಎಕಲೋಗಸ್‍ನಲ್ಲಿ ಈತ ಥಿಯೋಕ್ರಿಟಸ್‍ನ ಗ್ರೀಕ್ ಪ್ಯಾಸ್ಟೋರಲ್ ಕವಿತೆಗಳನ್ನು ಅನುಸರಿಸಿದ್ದಾನೆ. ಆದರೆ ಇವನ ಕೃತಿಯಲ್ಲಿ ಇವು ಇಟಾಲಿಯನ್ ಜೀವನಶೈಲಿಯನ್ನು ಪ್ರಕಟಿಸುತ್ತವೆ.

	ಇವನು ತನ್ನ ಜಾರ್ಜಿಕಸ್ ಕೃತಿಯ ಕವಿತೆಗಳನ್ನು ಬರೆಯಲು  ಏಳು ವರ್ಷ ತೆಗೆದುಕೊಂಡ. ಇದು ಕ್ರಿ.ಪೂ. 29ರಲ್ಲಿ ಪ್ರಕಟವಾಯಿತು. ಈ ಕವಿತೆಗಳು ರೈತರನ್ನುದ್ದೇಶಿಸುವಂಥವು. ಬೆಳೆ, ಪೈನ್, ಆಲಿವ್ ಮರಗಳು, ಪಶು ಹಾಗೂ ಕುದುರೆ ಸಾಕಣಿಕೆ, ಜೇನು ಕೃಷಿ ಮುಂತಾದುವನ್ನು ಕುರಿತ ಮಾಹಿತಿ ಇಲ್ಲಿದೆ. ಆದರೆ ಇವು ಕೇವಲ ಮಾಹಿತಿ ಸಂಗ್ರಹವಾಗದೆ ಇಟಲಿಯ ಗ್ರಾಮೀಣ ಬದುಕಿನ ಸುಂದರ ಚಿತ್ರಣಗಳಾಗಿವೆ. ಮಾನವನ ಬದುಕಿನ ವಿಭಿನ್ನ ಮುಖಗಳನ್ನೂ ಇವು ಪರಿಚಯಿಸುತ್ತವೆ.

	ಇವನ ಈನಿಯಡ್ ಮಹಾಕಾವ್ಯ ರೋಮ್‍ನ ಹಲವು ಹತ್ತು ಕೋನಗಳನ್ನು ನೀಡುತ್ತದೆ. ಅದರ ಮೊದಲ ಆರು ಅಧ್ಯಾಯಗಳು ಹೋಮರ್‍ನ ಮಹಾಕಾವ್ಯಗಳಾದ ಒಡಸ್ಸಿಯಿಂದಲೂ ಅನಂತರದ ಆರು ಅಧ್ಯಾಯಗಳು ಇಲಿಯಡ್ (ನೋಡಿ- ಇಲಿಯಡ್) ನಿಂದಲೂ ನೇರ ಪ್ರಭಾವಕ್ಕೆ ಒಳಗಾಗಿವೆ. ಪ್ರಾಚೀನ ರೋಮ್‍ನ ಆರಂಭ ಕಾಲದಿಂದ ಈತನ ಕಾಲದವರೆಗಿನ ಬದುಕಿನ ಚಿತ್ರಣ ಇಲ್ಲಿ ದೊರೆಯುತ್ತದೆ. ಗ್ರೀಕರ ಆಕ್ರಮಣದಿಂದ ರೋಮ್ ನಗರವನ್ನು ರಕ್ಷಿಸಿದ ವೀರ ಟ್ರೋಜನ್ ಅಥವಾ ಈನಿಯಸ್‍ನ ವರ್ಣನೆಯನ್ನು ಈ ಮಹಾಕಾವ್ಯ ನೀಡುತ್ತದೆ. ರೋಮನ್ನರ ದೃಷ್ಟಿಯಲ್ಲಿ ದೈವಿಕ ಶಕ್ತಿಗಳುಳ್ಳ ವೀರ ಅಗಸ್ಟಸ್ ಕ್ರಿ.ಪೂ. 40-30 ರವರೆಗಿನ ಅಂತರ್ಯುದ್ಧದಿಂದ ರೋಮನ್ನು ಉಳಿಸಿದ ಕಾರಣ ಅಗಸ್ಟಸ್‍ನಿಗೆ ವಿಶೇಷ ಸ್ಥಾನಮಾನವಿದೆ. ಈನಿಯಸ್ ಅಗಸ್ಟಸ್‍ನ ಕುಲಬಾಂಧವನಾದ ಕಾರಣ ಪರಂಪರಾನುಗತವಾದ ದೈವಿಕ ಶಕ್ತಿ ಅವನಲ್ಲಿದೆಯೆಂದು ಈ ಕಾವ್ಯ ನಂಬುತ್ತದೆ.

	ರೋಮನ್ ಶಾಲೆಗಳಲ್ಲಿ ಇವನ ಕೃತಿಗಳನ್ನು ಪಠ್ಯಗಳನ್ನಾಗಿಸಲಾಗಿದೆ. ಈನಿಯಡ್ ಮಹಾಕಾವ್ಯವನ್ನು ರೋಮನ್ ದೇವಾಲಯಗಳಲ್ಲಿ ಪವಿತ್ರ ಕೃತಿಯೆಂದು ಆರಾಧನೆಗಿಡಲಾಗಿದೆ. ಅನಂತರದ ಕಾಲದಲ್ಲಿ ಕ್ರೈಸ್ತ ಕವಿಗಳು ಕ್ರೈಸ್ತ ನಂಬಿಕೆಗಳನ್ನು ಪ್ರಚಾರ ಮಾಡಲು ಇವನ ಕವಿತೆಗಳನ್ನು ಉಲ್ಲೇಖಿಸುವ ಅಭ್ಯಾಸ ಮಾಡಿಕೊಂಡರು. ಮಧ್ಯಯುಗದಲ್ಲಿ ಇವನನ್ನು ಸಂತಕವಿಯೆಂದೂ ಆರಾಧಿಸಲಾಗಿದೆ. ಮುಂದೆ ಕ್ರಿಸ್ತ ಹುಟ್ಟುವುದನ್ನು ಈತ ಮೊದಲೇ ಕಂಡಿದ್ದ ಹಾಗೂ ಅವನೊಬ್ಬ ಭವಿಷ್ಯ ಬಲ್ಲ ಗಾರುಡಿಗನಾಗಿದ್ದ ಎಂದೂ ನಂಬಲಾಗಿದೆ.

	ಪ್ರಪಂಚದ ಮತ್ತೊಬ್ಬ ಮಹಾನ್ ಕವಿಯಾದ ಡಾಂಟೆ ತನ್ನ ದ ಡಿವೈನ್ ಕಾಮಿಡಿ (1321)ಯಲ್ಲಿ ಈನಿಯಡ್‍ನ 6ನೆಯ  ಅಧ್ಯಾಯವನ್ನು ಬಳಸಿಕೊಂಡಿದ್ದಾನೆ. ಪುನರುತ್ಥಾನ ಕಾಲದಲ್ಲಿ ಇಂಗ್ಲೆಂಡ್, ಇಟಲಿ ಹಾಗೂ ಫ್ರಾನ್ಸ್ ಸಾಹಿತ್ಯ ಕ್ಷೇತ್ರದಲ್ಲಿ ಇವನ ಎಕಲೋಗಸ್ ಕೃತಿ ಅಲ್ಲಿನ ಪ್ಯಾಸ್ಟೋರಲ್ ಕವಿತೆಗಳನ್ನು ಪ್ರಭಾವಿಸಿದೆ. ಆಂಗ್ಲ ಕವಿಗಳಿಗೆ ಆ ಕಾಲಕ್ಕೆ ಈತ ಒಬ್ಬ ಆದರ್ಶ ಕವಿ. ಜಾನ್ ಮಿಲ್ಟನ್ ತನ್ನ ಪ್ಯಾರಡೈಸ್ ಲಾಸ್ಟ್ (1667) ನಲ್ಲಿ ಈತನನ್ನು ಅನುಕರಿಸಿದ್ದಾನೆ. 1660 ರಲ್ಲಿ ಜಾನ್ ಡ್ರೈಡನ್ ಈನಿಯಡ್ ಕಾವ್ಯವನ್ನು ಇಂಗ್ಲಿಷ್‍ಗೆ ಅನುವಾದಿಸಿದ. 1800ರ ಅನಂತರದ ಕವಿಗಳಾದ ವಡ್ರ್ಸ್‍ವರ್ತ್, ಲಾರ್ಡ್‍ಟೆನಿಸನ್ ಹಾಗೂ 1900ರ ಅನಂತರದ ಮಹಾನ್ ವಿಮರ್ಶಕ ಟಿ.ಎಸ್.ಎಲಿಯಟ್‍ನಂಥವರೂ ಇವನ ಕಾವ್ಯದ ಪ್ರಭಾವಕ್ಕೊಳಗಾಗಿದ್ದಾರೆ.

	(ಜಿ.ಎನ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ